ಗುರುವಾರ, ಅಕ್ಟೋಬರ್ 28, 2010

ನನ್ನ ಮೊದಲ ಸಂಬಳ

           
            ನನ್ನ ಮೊದಲ ಸಂಬಳ, ಹೀಗೊಂದು ಕಾನ್ಸೆಪ್ಟ್ ಬರಲು ಕಾರಣ ನನ್ನ ಮೊದಲ ಸಂಬಳ. ಇಲ್ಲಿ ನಾನು ನನ್ನ ಮೊದಲ ಸಂಬಳವನ್ನು ನೊಡಿದ ಅನುಭವದ ಪರಾಮರ್ಶೆ ಮಾಡುವ ಪ್ರಾಮಾಣಿಕ ಪ್ರಯತ್ನ ನಡೆದಿದೆ, ನನ್ನ ಮನಸ್ಸಿನ ದ್ವಂಧ್ವಗಳ ಗುದ್ದಾಟ ನಡೆದಿದೆ.
            ನನ್ನ ದೃಷ್ಟಿಯಲ್ಲಿ ಸಂಬಳ ಎಂದರೆ, ಮುಂದಿನ ಒಂದು ತಿಂಗಳ ಅನ್ನದ ಭರವಸೆ, ಚಿಕ್ಕ ಪುಟ್ಟ ಕಮಿಟ್ಮೆಂಟ್ಗಳ ಸಬ್ಸ್ಟಿಟ್ಯೂಟ್ ....
ತಿಂಗಳು ಪೂರ್ತಿ ದುಡಿದು, ತಿಂಗಳ ಕೊನೆಯ ದಿನ ಪಡೆಯುವ ಹಣದ ತೂಕ ಇಷ್ಟು ಭಾರ, ಎಂದು ತಿಳಿಯಲು ಮೊದಲ ಸಂಬಳವನ್ನೇ ಪಡೆಯಬೇಕಾಯಿತು.ಅದರ ಜೊತೆಗೆ ಮಾನಸಿಕ  ಸ್ಥಿತಿಯೂ  ಬದಲಾದದ್ದು ವಿಚಿತ್ರ. ನನ್ನ ಮೊದಲ ಸಂಬಳದ ಸಂತಸವನ್ನು ಅಮ್ಮನಲ್ಲಿ ಹಂಚಿಕೊಳ್ಳಬೇಕೆನಿಸಿ ಫ಼ೊನಾಯಿಸಿದೆ, ಅಮ್ಮ ಸಂಭ್ರಮಿಸಿದಳು, ಅಪ್ಪಾಜಿ ಹಾರೈಸುತ್ತಾ ಎಷ್ಟು ಬಂದಿದೆ ಎಂದರು. ಒಟ್ಟು ಒಂಭತ್ತು ದಿನದ್ದು 3800 ರೂ. ಎಂದೆ. ನಿನ್ನ ಶಿಕ್ಶಣ ಸಾಲದ ಒಂದು ಕಂತು ಎಂದರು. ಆ ಮಾತಿನಲ್ಲಿ ವ್ಯಂಗ್ಯವಿತ್ತೊ, ನಿಜ ಬದುಕನ್ನು ಅರ್ಥೈಸಿಕೊಡುವ ಪ್ರಯತ್ನವಿತ್ತೊ, ತಿಳಿಯೆ..ಆಗ ನನ್ನ ತಂದೆ ತನ್ನ ಮೊದಲ ಸಂಬಳದ ಬಗ್ಗೆ ಹೇಳಿದ ಮಾತುಗಳು ನೆನಪಾದವು. ಅವರಿಗೆ 150 ರೂ. ಸಂಬಳವಂತೆ, ಅದರಲ್ಲಿ 65 ರೂ. ತಿಂಗಳ ಖರ್ಚಿಗೆ ಸಾಕಾಗುತ್ತಿತ್ತಂತೆ,85 ರೂ ತಿಂಗಳೂ ಉಳಿಯುತ್ತಿತ್ತಂತೆ. ಆ ಮಾತು ನೆನೆದು ಒಮ್ಮೆ ಜೀಬು ಮುಟ್ಟಿಕೊಂಡೆ, ಒಳಗಿದ್ದ 3800 ರೂ. "ಹೇಳು ಗೆಳೆಯಾ ಯಾವುದಕ್ಕೆ ಎಷ್ಟು?" ಎಂದು. ನಾನಂದೆ, "ಆಮೇಲೆ ಯೋಚನೆ ಮಾಡೋಣ ಸಲ್ಪ ಹೊತ್ತು ಅಲ್ಲೇ ಇರು". ಮರುಕ್ಷಣ ಸಂತಸ, ಮರುಕ್ಷಣ ಬೀಸಿದ ಬಿಸಿ ಗಾಳಿ ಮನಸ್ಸನ್ನು ಖಿನ್ನತೆಗೆ ಒಳಪಡಿಸಿತು. ಕೂದಳೊಳಗಿಂದಿಳಿದ ಬೆವರ ಹನಿ ಮೂಗು ಮುಟ್ಟುವ ಮೊದಲು, ಎದೆಯ ಗೂಡಿಂದೊಂದು ಪ್ರಶ್ನೆ "ನನ್ನ ತಂದೆ ಕಳೆದ 25 ವರ್ಷಗಳಿಂದಲೂ ದುಡಿಯುತ್ತಿದ್ದಾರೆ.. ನಾನೂ ಖರ್ಚು ಮಾಡುತ್ತಲೇ ಬಂದೆ.. ಇನ್ನು ಮನೆಯಲ್ಲಿ ಕೇಳಬಾರದು ಎಲ್ಲಾ ಸರಿ ಮಾಡಬೇಕು..".ಎಂದುಕೊಳ್ಳುವಸ್ಟರಲ್ಲಿ ಜೇಬಲ್ಲಿದ್ದ 3800 ರೂ. " ಗುರೂ ಯಾರು ಯಾರಿಗೆ ಎಷ್ಟು?". ನಾನು "ಏ ಗಪ್ ಚುಪ್ ಬಾಯ್ ಮುಚ್" ಎಂದು ತಲೆ ಮೇಲೆತ್ತುವಸ್ಟರಲ್ಲಿ "ಅಯ್ಯೋ ನನ್ನ ಮೊದಲ ಸಂಬಳದಲ್ಲಿ ಅಮ್ಮನಿಗೆ ಬಳೆ ಕೊಡಿಸಬೇಕೆಂದುಕೊಂಡಿದ್ದೆ ಆದರೇ....",.."ಬಾಸ್ ಯಾರಿಗೆ ಎಷ್ಟು?" ಎಂಬ ದ್ವನಿ ಜೇಬೊಳಗಿಂದ. "ಹೊಂ... ಬಾಡಿಗೆಗೆ 1000 , ಊಟದ ಖರ್ಚಿಗೆ 1500, ಬಸ್ಸಿಗೆ 600 , ಪೇಸ್ಟು ಎಣ್ಣೆ,ಸೊಪು ಎಂತೆಲ್ಲಾ 300 , ಕೈ ಕರ್ಚಿಗೆ 400, ಮತ್ತೆ ಬಳೆಗೆ....?????.." ಎಂದು ಕಣ್ಣಾಡಿಸುವಸ್ಟರಲ್ಲಿ "ನಾನಿದ್ದೇನಲ್ಲಾ..!!!" ಎಂದು ಮುಂದಿನ ತಿಂಗಳು ಕೈ ಬೀಸಿದಂತಾಗಿ, ನಿಟ್ಟುಸಿರು.....